ವಾಯುಯಾನ
	ವಾಯುಮಂಡಲದಲ್ಲಿ ಪಕ್ಷಿಗಳ ತೆರದಲ್ಲಿ ಹಾರುವುದನ್ನು ಕುರಿತ ವಿಜ್ಞಾನ ಮತ್ತು ಯಂತ್ರಕಲೆ (ಏವಿಯೇಷನ್). ಈ ಬಯಕೆಯನ್ನು ಕೈಗೂಡಿಸಿಕೊಳ್ಳಲು ಮಾನವ ಬಲು ಹಿಂದಿನ ಕಾಲದಿಂದಲೇ ಮಾಡಿದ ಪ್ರಯತ್ನಗಳು ಹಲವಾರು. ಹಕ್ಕಿಗಳಂತೆ ರೆಕ್ಕೆ ಕಟ್ಟಿಕೊಂಡು ಹಾರಲು ಯತ್ನಿಸಿದುದರಿಂದ ತೊಡಗಿ ವಿವಿಧ ರೀತಿಯ ಯಂತ್ರಗಳ ನೆರವಿನಿಂದ ಜಿಗಿಯಲು ಪ್ರಯತ್ನಿಸಿದುದರ ವರೆಗೆ ಆತ ಅನುಭವಿಸಿದ ಸಾವು, ನೋವು ಮತ್ತು ಪಟ್ಟ ಕಷ್ಟಗಳು ಅಪಾರ. ಈ ಬಯಕೆ ಬರಿಯ ಕನಸಾಗಿಯೇ ಉಳಿಯದೆ ನನಸಾದದ್ದು 19ನೆಯ ಶತಮಾನದ ಕೊನೆಯ ಭಾಗದಲ್ಲಿ. ಗಾಳಿಗಿಂತ ಭಾರವಾದ ಒಂದು ವಸ್ತುವನ್ನು ಅಂತರಿಕ್ಷದಲ್ಲಿ ತಂತಾನೇ ತೇಲುವಂತೆ ಮಾಡುವುದು ಹೇಗೆ ಎಂಬುದರ ಬಗ್ಗೆ ವಿಜ್ಞಾನಿಗಳು ಮಾಡಿದ ನಿರಂತರ ಪ್ರಯತ್ನ, ಪ್ರಯೋಗಗಳ ಫಲವೇ ವಿಮಾನ. ವಿಮಾನ ಸಾರಿಗೆ ಲಾಭದಾಯಕ ಉದ್ಯಮವೆಂದು ತಿಳಿದುದು 20ನೆಯ ಶತಮಾನದ ಪೂರ್ವಾರ್ಧದಲ್ಲಿ. ಪ್ರಪಂಚದ ಒಂದು ಮತ್ತು ಎರಡನೆಯ ಮಹಾಯುದ್ಧ (1914-18, 1939-45) ದಿನಗಳಂದು ನಾನಾ ರೀತಿಯ ವಿಮಾನಗಳ ರಚನೆ, ಸಾಮಥ್ರ್ಯ ಮತ್ತು ಬಳಕೆ ಬಗ್ಗೆ ವಿಶೇಷ ಪ್ರಯೋಗಗಳು ನಡೆಸಲ್ಪಟ್ಟು ವಿಮಾನಯಾನ ಈಗ (21ನೆಯ ಶತಮಾನ) ಒಂದು ವ್ಯವಸ್ಥಿತ ಸ್ಥಿತಿಗೆ ಬಂದಿದೆ ಎನ್ನಬಹುದು. ಕಳೆದ ನಾಲ್ಕೈದು ದಶಕಗಳಲ್ಲಿ ವಿಮಾನಯಾನ ದಲ್ಲಿ ಆಗಿರುವ ಪ್ರಗತಿ ನಿಜವಾಗಿಯೂ ಆಶ್ಚರ್ಯಪಡುವಂತಹುದು. ಸದ್ಯದ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಸಾಗಣೆಯಲ್ಲಿ ವಿಮಾನಗಳು ವಹಿಸುತ್ತಿರುವ ಪಾತ್ರವನ್ನು ಗಮನಿಸಿದರೆ ಇನ್ನು ಕೆಲವೇ ವರ್ಷಗಳಲ್ಲಿ ಭೂ ಇಲ್ಲವೇ ಜಲವಾಹನಗಳು ಈ ಸ್ಪರ್ಧೆಯಲ್ಲಿ ಹಿಂದೆ ಬೀಳುವುವೇನೋ ಎನ್ನಿಸುತ್ತದೆ. 

	ಶೀಘ್ರ ಪ್ರಯಾಣ ಮತ್ತು ಸರಕು ಸಾಗಣೆಗಳಿಗೆ ವಿಮಾನಯಾನ ಹೆಸರು ಪಡೆದಿದೆ. ಯಾವುದೇ ಭೂ ಇಲ್ಲವೇ ಜಲವಾಹನಗಳಿಂದ ಈ ಕ್ಷಿಪ್ರತೆ ಮತ್ತು ದಕ್ಷತೆ ಅಸಾಧ್ಯ. ಇದೇ 50 ವರ್ಷಗಳ ಹಿಂದೆ ಪ್ರಪಂಚ ಪರ್ಯಟನೆಗೆ ತಿಂಗಳುಗಟ್ಟಲೆ ವೇಳೆ ಬೇಕಾಗುತ್ತಿತ್ತು. ಆದರೆ ಈಗ ವಿಮಾನಗಳ ನೆರವಿನಿಂದ ಕೇವಲ ಒಂದು ವಾರದಲ್ಲಿ ನಿರಾತಂಕವಾಗಿ, ನಡುವೆ ಸಾಕಷ್ಟು ವಿಶ್ರಾಂತಿ ಪಡೆದುಕೊಂಡು ಕೂಡ, ಈ ಪಯಣ ಮುಗಿಸಬಹುದು. ಈಮೇಲ್, ದೂರವಾಣಿ ಮುಂತಾದ ವಿದ್ಯುನ್ಮಾನ ವಿಧಾನಗಳಿಂದ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಸರಕುಗಳನ್ನು ಕೆಲವೇ ಘಂಟೆಗಳ ಒಳಗೆ ಬೇಕಾದ ಕಡೆಗೆ ತರಿಸಿಕೊಳ್ಳಬಹುದು. ಶೀಘ್ರವಾಗಿ ಕೆಡುವ ಪದಾರ್ಥಗಳನ್ನು ತ್ವರಿತವಾಗಿ ಸಾಗಿಸಿ ಬಳಕೆದಾರರಿಗೆ ದೊರೆಯುವಂತೆ ಮಾಡಬಹುದು. 
	
ವಿಮಾನಗಳು ಚಲಿಸುವ ಅಂತರಿಕ್ಷ ಮಾರ್ಗ ನಿಸರ್ಗದತ್ತವಾದುದು. ಅದರ ನಿರ್ಮಾಣ ಅಥವಾ ದುರಸ್ತಿಯ ಆವಶ್ಯಕತೆ ಕಂಡುಬರದು. ಆದರೆ ವಿಮಾನಗಳು ಅಂತರಿಕ್ಷದಲ್ಲಿ ಮನಬಂದಂತೆ ಚಲಿಸಲು ಬರುವುದಿಲ್ಲ; ಸುರಕ್ಷಿತತೆ ಮತ್ತು ಕೆಲವೊಂದು ಸೌಕರ್ಯ ಒದಗಿಸುವುದರ ದೃಷ್ಟಿಯಿಂದ ಗೊತ್ತಾದ ಮಾರ್ಗಗಳಲ್ಲಿ ಮಾತ್ರ ಅವು ಹಾರ ಬೇಕಾಗುತ್ತದೆ. ಸುರಕ್ಷಿತವಾಗಿ ಇಳಿಯಲು ಮತ್ತು ಹಾರಲು ಓಡು ದಾರಿಗಳು (ರನ್‍ವೇಸ್) ಬೇಕು. ರಾತ್ರಿ ವೇಳೆ ಸಂಚರಿಸಲು ಅನುಕೂಲವಾಗುವಂತೆ ದಿಕ್ಕು ತೋರಿಸಲು ದೀಪಗಳು, ಬೇಕಾದ ಉರುವಲು ಪೂರೈಕೆ ವ್ಯವಸ್ಥೆ, ಸಣ್ಣಪುಟ್ಟ ದುರಸ್ತಿಗಳಿಗೆ ಅವಕಾಶ, ಹವಾಮುನ್ಸೂಚನೆಯ ಸಾಧನಗಳು, ರೇಡಿಯೊಸಂಪರ್ಕವ್ಯವಸ್ಥೆ, ವಿಮಾನ ಖಾನೆಗಳು (ಹ್ಯಾಂಗರ್ಸ್) ಪ್ರಯಾಣಿಕರಿಗೆ ಬೇಕಾದ ಕೆಲವೊಂದು ಸೌಕರ್ಯಗಳು ದೊರೆಯುವಂತೆ ಅಲ್ಲಲ್ಲಿ ಏರ್ಪಾಡಿದೆ. ಇವೆಲ್ಲವುಗಳ ನೆಲೆಯ ಒಟ್ಟು ಹೆಸರು ವಿಮಾನಾಂಗಣ ಅಥವಾ ವಿಮಾನ ನಿಲ್ದಾಣ. ಸಾಮಾನ್ಯವಾಗಿ ಇವನ್ನು ಪ್ರಮುಖ ಪಟ್ಟಣಗಳಿಂದ ಸ್ವಲ್ಪ ದೂರದಲ್ಲಿ ನಿರ್ಮಿಸಲಾಗುವುದು. ಅಲ್ಲಿಗೆ ತಲಪಲು ನೆಲ ಸಂಪರ್ಕ ಹಾದಿಗಳೂ ನಿಯೋಜಿತ ವಾಹನಗಳೂ ಅಗತ್ಯ. ವಿಮಾನಯಾನ ಉದ್ಯಮಕ್ಕೆ ಅಧಿಕ ಬಂಡವಾಳಬೇಕು. ವಿಮಾನಗಳ ಬೆಲೆ ದುಬಾರಿ, ಅವು ಸದಾ ಯಾನಯೋಗ್ಯ ಸ್ಥಿತಿಯಲ್ಲಿರುವಂತೆ ಕಾಪಾಡಿಕೊಳ್ಳುವುದು ಕಷ್ಟದ ಹೊಣೆ. ಉದ್ಯಮದಲ್ಲಿ ಅವನ್ನು ಲಾಭದಾಯಕವಾಗುವಂತೆ ತೊಡಗಿಸಬಹುದಾದ ಕಾಲ ತೀರ ಕಡಿಮೆ; ಅಷ್ಟು ಅಲ್ಪ ಕಾಲದಲ್ಲಿ ವಿಮಾನಗಳನ್ನು ಆದಷ್ಟು ಉಪಯುಕ್ತ ಸೇವೆಯಲ್ಲಿ ತೊಡಗಿಸಿ ಪ್ರತಿಫಲ ಹೊಂದಬೇಕು. ಇತ್ತ ಹೊಸ ಮಾದರಿಯ, ಸುಧಾರಿತ ವಿಮಾನಗಳು ಬಳಕೆಗೆ ಬಂದರೆ ಚಾಲ್ತಿಯಲ್ಲಿರುವವು ಮೂಲೆಗುಂಪೇ. ಯಾನಯೋಗ್ಯ ವಿಮಾನ ನಿರ್ಮಾಣ ಮತ್ತು ಅದರ ಕ್ಷಮತೆರಕ್ಷಣೆ, ಸುಸಜ್ಜಿತ ವಿಮಾನಾಂಗಣ, ಸಮರ್ಥ ಸಾರಥಿ, ಉರುವಲು ಪೂರೈಕೆ, ನೆಲ ಎಂಜಿನಿಯರಿಂಗ್ ಕೆಲಸ ಮುಂತಾದವು ದುಬಾರಿ ವೆಚ್ಚದ ಬಾಬಿನವು. ಇವೆಲ್ಲವನ್ನೂ ಭರಿಸಿ ವಿಮಾನೋದ್ಯಮ ಬೆಳೆಯಬೇಕು-ಹೆಜ್ಜೆ ಹೆಜ್ಜೆಗೆ ಹೊಸ ಸವಾಲುಗಳನ್ನು ಎದುರಿಸುತ್ತ ಅಭಿವೃದ್ಧಿಗೊಳ್ಳಬೇಕು. ಇಂಥ ಅಭಿವೃದ್ಧಿ ಸಾಧ್ಯವಾಗು ತ್ತಿರುವುದು ಮಾನವನ ಅದಮ್ಯ ಸಾಹಸಪ್ರಜ್ಞೆಗೆ ದ್ಯೋತಕ. 

	ವಿಮಾನಗಳ ಉಪಯುಕ್ತತೆ ಬಹುಮುಖಿ. ಸರಕು ಸಾಗಣೆ ಮತ್ತು ಪ್ರಯಾಣಿಕರ ಯಾನಗಳ ಜೊತೆಗೆ ಕದನರಂಗದಲ್ಲಿ ದೇಶರಕ್ಷಣೆ, ಪ್ರವಾಹ, ಭೂಕಂಪನ ಮುಂತಾದ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನ ಜಾನುವಾರು ಆಸ್ತಿಗಳನ್ನು ಪಾರುಮಾಡುವುದು, ಬೆಳೆಗಳ ಮೇಲೆ ಕ್ರಿಮಿನಾಶಕಗಳ ಸಿಂಪಡಿಕೆ, ಮೋಡ ಬಿತ್ತನೆ, ಅರಣ್ಯ ಸಂಪತ್ತಿನ ರಕ್ಷಣೆ ಮುಂತಾದವು. ದೇಶದ ಗಡಿರಕ್ಷಣೆಯಲ್ಲಿ ವಿಮಾನಗಳ ಪಾತ್ರ ಅತಿಮುಖ್ಯ. ನೈಸರ್ಗಿಕ ಸಂಪನ್ಮೂಲಗಳ ಅನ್ವೇಷಣೆ, ಅಂತಾರಾಷ್ಟ್ರೀಯ ಬೇಹುಗಾರಿಕೆ, ಹವಾಮುನ್ಸೂಚನೆ, ನದೀಪಾತ್ರಗಳ ಶೋಧನೆ ಇತ್ಯಾದಿ ರಂಗಗಳಲ್ಲಿ ವೈಮಾನಿಕಾನ್ವೇಷಣೆ ರಾಷ್ಟ್ರೀಯ ಯೋಜನೆಗಳ ರೂಪಣೆ ನಿರ್ವಹಣೆಗಳಿಗೆ ಅತ್ಯಗತ್ಯ. 

	ಮೂರುನಾಲ್ಕು ದಶಕಗಳಿಂದೀಚೆಗೆ ವಿಮಾನಗಳು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಅತಿ ಮಹತ್ತ್ವದ ಪಾತ್ರ ವಹಿಸುತ್ತಿವೆ. ಈ ಸಾರಿಗೆಯ ಅಭಿವೃದ್ಧಿಗೆ ಅಡ್ಡಿ ಆತಂಕಗಳು ಹೆಚ್ಚು. ಆಯಾ ದೇಶದ ಮೇಲಿನ ಅಂತರಿಕ್ಷದ ಸ್ವಾಮ್ಯ ಆ ದೇಶಕ್ಕೇ ಸೇರಿದ್ದು. ಯಾವುದೇ ದೇಶದ ವಿಮಾನ ಇನ್ನೊಂದು ಅಂತರಿಕ್ಷದಲ್ಲಿ ಸಂಚರಿಸಲು ಈ ಎರಡನೆಯದರ ಅನುಮತಿ ಪಡೆಯಲೇಬೇಕು. ಅಲ್ಲದೇ ಆ ದೇಶದ ಕಾನೂನು ಕಟ್ಟಳೆ ಮತ್ತು ಸುಂಕದ ನಿಬಂಧನೆಗಳಿಗೆ ಇನ್ನೊಂದು ದೇಶದ ವಿಮಾನ ಒಳಪಡಬೇಕು. ರಾಷ್ಟ್ರ ರಾಷ್ಟ್ರಗಳ ನಡುವೆ ತಲೆದೋರಬಹುದಾದ ಘರ್ಷಣೆ ಮತ್ತು ಅಭಿಪ್ರಾಯ ಭೇದಗಳ ನಿವಾರಣೆಗೆ ಇದು ಆವಶ್ಯಕ. ಅಂತಾರಾಷ್ಟ್ರೀಯ ವಿಮಾನಯಾನ ಕಾರ್ಯ ಸುಸೂತ್ರವಾಗಿ ಸಾಗುವಂತೆ ಮಾಡಲು ಯಾನಕಾರ್ಯದಲ್ಲಿ ತೊಡಗಿರುವ ರಾಷ್ಟ್ರಗಳು ವಿಶ್ವಸಂಸ್ಥೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘ (ಇಂಟನ್ರ್ಯಾಶನಲ್ ಸಿವಿಲ್ ಏವಿಯೇಶನ್) ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡಿವೆ. ಈ ಸಂಘ ಕೆಲವೊಂದು ನೀತಿ ನಿಯಮಗಳನ್ನೂ ಕಟ್ಟುಪಾಡುಗಳನ್ನೂ ರಚಿಸಿದೆ. ಯಾನನಿರತ ಸದಸ್ಯ ರಾಷ್ಟ್ರಗಳು ಇವನ್ನು ಅಂಗೀಕರಿಸಿ ಪಾಲಿಸಲು ಬದ್ಧವಾಗಿವೆ. ನಿಯಮಗಳನ್ನು ಉಲ್ಲಂಘಿಸಿದರೆ ತಕ್ಕ ಪರಿಹಾರ ಕೊಡಲು ವಚನಬದ್ಧವಾಗಿವೆ. ನಿಯಮಗಳನ್ನು ಪಾಲಿಸದಿದ್ದರೆ ಸಂಘದ ಸದಸ್ಯತ್ವ ಕಳೆದು ಹೋಗುವುದೆಂಬ ಭೀತಿ ಅವುಗಳಲ್ಲಿರುವುದರಿಂದ ಯಾನಕಾರ್ಯದಲ್ಲಿ ತೊಡಗಿರುವ ತಮ್ಮ ದೇಶದ ವಿಮಾನಯಾನ ಸಂಸ್ಥೆಗಳು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳುತ್ತಿವೆ. ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಹೀಗೆ ಒಂದು ವ್ಯವಸ್ಥಿತ ರೀತಿಯಲ್ಲಿ, ಶೀಘ್ರ ಗತಿಯಲ್ಲಿ ಮುಂದುವರಿಯುತ್ತಿದೆ. 

	ಯಾವುದೇ ವಾಹನದ ಯಾನ ಸಮರ್ಪಕತೆಯನ್ನು ಒರೆಗೆ ಹಚ್ಚುವಾಗ, ಶೀಘ್ರತೆ, ಸುರಕ್ಷತೆ, ಸಾರಿಗೆಯ ದರ, ಸಾಗಿಸಬಲ್ಲ ಭಾರ ಮತ್ತು ಅದು ಎಷ್ಟರಮಟ್ಟಿಗೆ ದೇಶದ ಅಗತ್ಯತೆಗಳನ್ನು ಪೂರೈಸುವುದು ಈ ದೃಷ್ಟಿಕೋನಗಳಿಂದ ಅಳೆಯುವುದು ಸಂಪ್ರದಾಯ. ಶೀಘ್ರತೆಯೊಂದನ್ನು ಬಿಟ್ಟರೆ ವಿಮಾನಸಾರಿಗೆ, ಬೇರಾವ ಲಕ್ಷಣಗಳನ್ನೂ ಪೂರೈಸದು. ನಾಗರಿಕ ವಿಮಾನಯಾನ ಮತ್ತು ವಿಮಾನಗಳ ಮೂಲಕ ಸರಕು ಸಾಗಾಣಿಕೆಯಲ್ಲಿ ಹೆಚ್ಚಳ ಕಂಡುಬರುತ್ತಿದೆಯಾದರೂ ಆಗಾಗ್ಗೆ ಸಂಭವಿಸುವ ವಿಮಾನಾಪಘಾ ತಗಳು ವಿಮಾನಯಾನ ಸುರಕ್ಷಿತವಲ್ಲ ಎಂಬ ಶಂಕೆಯನ್ನು ಜನರಲ್ಲಿ ಹುಟ್ಟಿಸಿವೆ. ರಾತ್ರಿ ಸಂಚಾರ ಇನ್ನೂ ನಿರುಪಾಧಿಕವಾಗಿಲ್ಲ. ಚಂಡಮಾರುತಗಳ ಅವಾಂತರ, ಮಂಜು ಮತ್ತು ಹಿಮಪಾತ, ಪ್ರತಿಕೂಲ ಹವಾಮಾನ ಇವು ವಿಮಾನಗಳ ಸರಾಗ ಹಾರಾಟ, ಸುರಕ್ಷಿತ ಇಳಿಕೆ ಮತ್ತು ನಿರಾತಂಕ ಪ್ಲಾವನಗಳಿಗೆ ಆತಂಕ ಉಂಟು ಮಾಡುತ್ತವೆ. ವಿಮಾನಗಳಲ್ಲಿ ಹೆಚ್ಚಿನ ಸ್ಥಳಾವಕಾಶ, ಅವು ಹೆಚ್ಚು ಭಾರ ಹೊರುವಂತೆ ನಿರ್ಮಿಸುವುದು, ಅಂತರಿಕ್ಷದಲ್ಲಿ ಉದ್ಭವಿಸುವ ಯಾಂತ್ರಿಕ ತೊಂದರೆಗಳ ಸುಲಭ ನಿವಾರಣೋಪಾಯ, ಸಾರಿಗೆ ದರಗಳಲ್ಲಿ ಕಡಿತ ಇವನ್ನು ಸಾಧಿಸಿದರೆ ಮುಂಬರುವ ದಿನಗಳಲ್ಲಿ ನಾಗರಿಕ ವಿಮಾನಯಾನಕ್ಕೆ ಒಳ್ಳೆಯ ಭವಿಷ್ಯವಿದೆ.     
			(ಬಿ.ಎಸ್.ಬಿ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ